ಬಾಟ
ಒಂದು ಕಾರ್ಪು ಮೀನು. ಲೇಬಿಯೊ ಬಾಟ ಇದರ ಶಾಸ್ತ್ರೀಯ ಹೆಸರು. ಇದು ಹೆಚ್ಚಾಗಿ ಆಂಧ್ರ, ಒರಿಸ್ಸ, ಬಂಗಾಳ ಮತ್ತು ಅಸ್ಸಾಮ್‍ಗಳಲ್ಲಿ ದೊರಕುತ್ತದೆ. ಸಾಮಾನ್ಯವಾಗಿ ಇದರ ಬಣ್ಣ ಬೆಳ್ಳಿಯಂತೆ. ವಯಸ್ಸಾದಂತೆ ಬದಲಾಗುತ್ತದೆ. ಬೆನ್ನಿನ ಉದ್ದಕ್ಕೂ ಕಪ್ಪುಬಣ್ಣ. ತಳಭಾಗದಲ್ಲಿ ಕಿತ್ತಲೆ ಬಣ್ಣದ ಈಜುರೆಕ್ಕೆಗಳುಂಟು. ಎಲ್ಲ ಈಜುರೆಕ್ಕೆಗಳ ಮೇಲೂ ಸಣ್ಣ ಕಪ್ಪುಚುಕ್ಕೆಗಳಿವೆ. ಮೀನು 10 ಸೆಂಮೀ ಉದ್ದ ಬೆಳೆದಾಗ ಪಾಶ್ರ್ವರೇಖೆಯ 5 ಮತ್ತು 6ನೆಯ ಹುರುಪೆಗಳ ಮೇಲೂ ಮೂರು ಅಥವಾ ನಾಲ್ಕು ಕಪ್ಪುಚುಕ್ಕೆಗಳು ಇದ್ದು ಮೀನು ಇನ್ನೂ ಹೆಚ್ಚು ಬೆಳೆಯುತ್ತ ಹೋದಂತೆ ಅದೃಶ್ಯವಾಗುತ್ತವೆ.

ಬಾಟ ಆಹಾರದ ದೃಷ್ಟಿಯಿಂದ ಒಳ್ಳೆಯ ಮೀನಾದ್ದರಿಂದ ಮಿಕ್ಕ ಮುಖ್ಯ ಕಾರ್ಪುಗಳಾದ ಕಾಟ್ಲ, ರೋಹು ಮತ್ತು ಮೃಗಾಲ್ ಮೀನುಗಳ ಜೊತೆಗೆ ಇದನ್ನೂ ಕೊಳಗಳಲ್ಲಿ ಸಾಕುವುದಿದೆ. ಬೆಳೆದ ಮೀನು ಮೃಗಾಲ್ ಮೀನನ್ನು ಹೋಲುತ್ತದಾದರೂ ಇದರ ದೇಹ ಮೃಗಾಲ್ ಮೀನಿನ ದೇಹಕ್ಕಿಂತ ಹೆಚ್ಚು ದಪ್ಪ ಹಾಗೂ ಹೊಳೆಯುವ ಬೆಳ್ಳಿಯ ಬಣ್ಣದಿಂದ ಕೂಡಿದೆ. ಮೃಗಾಲಿನಲ್ಲಿದ್ದ ಹಾಗೆ ಮೂತಿ ಚೂಪಾಗಿಲ್ಲ. ಅಲ್ಲದೆ ತುಟಿಗಳು ತೆಳುವಾಗಿವೆ. ಬಾಯಿ ಮೃಗಾಲ್ ಮೀನಿನದಕ್ಕಿಂತ ಅಗಲ. ಮರಿಗಳು ಕೂಡ ಮೃಗಾಲಿನ ಮರಿಗಳನ್ನು ಹೋಲುತ್ತವೆ. ಆದರೆ ಬಾಲದ ಈಜು ರೆಕ್ಕೆಯಲ್ಲಿರುವ ಮಚ್ಚೆ ದೊಡ್ಡದು. ಅರ್ಧವರ್ತುಲಾಕಾರದ್ದು. ಇನ್ನೂ ಗಾಢ ಬಣ್ಣವುಳ್ಳದ್ದು. ಬಾಟದ ಆಹಾರ ಸೇವನೆ ಕ್ರಮವೂ ಮೃಗಾಲ್‍ನಂತೆಯೇ. ಇದು ಕೊಳಗಳ ತಳಭಾಗದಲ್ಲಿ ವಾಸಿಸುತ್ತದೆ. ಸಾವಯವ ಪದಾರ್ಥ, ನಾರುತ್ತಿರುವ ಸಸ್ಯ ಮತ್ತು ಪಾಚಿಗಳನ್ನೂ ತಿನ್ನುತ್ತದೆ.

ಬಾಟದ ಬೆಳವಣಿಗೆ ನಿಧಾನಗತಿಯದು. ಮುಂಗಾರಿನ ಸಮಯದಲ್ಲಿ ಮರಿ ಮಾಡುತ್ತದೆ. ಕರ್ನಾಟಕದಲ್ಲಿ ಬಾಟ ಮೀನನ್ನು ಮುಖ್ಯ ಕಾರ್ಪುಮರಿಗಳ ಜೊತೆಯಲ್ಲಿ ಬೆಳೆಸಲಾಗುತ್ತಿದೆ.			
		(ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ